ತೋರಮಾನ -
   ಸು. 500ರಲ್ಲಿದ್ದ ಒಬ್ಬ ಹೂಣ ಮುಖಂಡ. ಈತ ಪಂಜಾಬಿನಿಂದ ದಾಳಿ ಮಾಡಿ, ಪಶ್ಚಿಮ ಭಾರತ ಮತ್ತು ಮಧ್ಯ ಪ್ರದೇಶದ ವಿಶಾಲ ಪ್ರದೇಶವನ್ನು ಜಯಿಸಿದ. ಬಹುಶಃ ಬುಧಗುಪ್ತನ ಕಾಲಾನಂತರ ಈ ದಾಳಿಯಾಗಿರಬೇಕು. ಈತನ ಪರದೇಶೀಯ ಮೂಲವೂ ಇವನು ಉತ್ತರ ಪ್ರದೇಶ, ರಾಜಪುಟಾಣ, ಪಂಜಾಬ್ ಮತ್ತು ಕಾಶ್ಮೀರಗಳನ್ನು ಆಳುತ್ತಿದ್ದನೆಂಬುದೂ ಇವನ ನಾಣ್ಯಗಳಿಂದ ಗೊತ್ತಾಗುತ್ತದೆ. ಬಹುಶಃ ಈತ ಗಾಂಧಾರದ ಹೂಣರಾಜರ ವಂಶಕ್ಕೆ ಸೇರಿದವನಿರಬೇಕು. ಈತನ ವಿಷಯದಲ್ಲಿ ಖಚಿತವಾದ ಹೆಚ್ಚಿನ ದಾಖಲೆಗಳು ಯಾವುವೂ ಇಲ್ಲ. ಸು. 700ರಲ್ಲಿ ರಚಿತವಾದ ಕುವಲಯಮಾಲಾ ಎಂಬ ಜೈನಗ್ರಂಥದಲ್ಲಿ, ತೋರಮಾನ ಜೈನದೀಕ್ಷೆಯನ್ನು ಸ್ವೀಕರಿಸಿದನೆಂದೂ ಪಂಜಾಬಿನ ಚಂದ್ರಭಾಗಾ (ಚೀನಾಬ್) ನದಿಯ ತೀರದಲ್ಲಿದ್ದ ಪವೈಯಾ ಎಂಬಲ್ಲಿ ವಾಸಿಸುತ್ತಿದ್ದನೆಂದೂ ಹೇಳಲಾಗಿದೆ. ಈತ ಮಹಾರಾಜಾಧಿರಾಜ ಎಂಬ ಬಿರುದು ಧರಿಸಿದ್ದ. ಇವನ ಅನಂತರ ಈತನ ಮಗ ಮಿಹಿರಕುಲ 502ರಲ್ಲಿ ಪಟ್ಟಕ್ಕೆ ಬಂದ.									(ಎಚ್.ಜಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ